ಸಮ್ಮಿಳಿತ ನಿರ್ಮಾಣಗಳು -
	ವಿಭಿನ್ನ ಗುಣಧರ್ಮಗಳ ಎರಡು ಅಥವಾ ಹೆಚ್ಚು ಕಟ್ಟಡ ವ್ಯವಸ್ಥೆಗಳನ್ನು ಒಂದುಗೂಡಿಸಿ, ನಿರ್ಮಿಸಿದವು (ಕಾಂಪೊಸಿಟ್ ಕನ್‍ಸ್ಟ್ರಕ್ಷನ್ಸ್). ಆವಶ್ಯಕ ಪರಿಕರಗಳಿವು: ಚೌಬೀನೆ, ಉಕ್ಕು ಮತ್ತು ಕಾಂಕ್ರೀಟಿನ ಪೂರ್ವನಿರ್ಮಿತ ಅಂಗಗಳು, ಸ್ವಸ್ಥಾನ (ಇನ್‍ಸಿಟು) ಕಾಂಕ್ರೀಟಿನ ಅಂಗಗಳು. ಪೂರ್ವ ನಿರ್ಮಾಣ, ಎಂದರೆ, ನಿರ್ಮಾಣ ನಿವೇಶನದಲ್ಲದೆ ಬೇರೆ ಅನುಕೂಲ ಸ್ಥಳ ಅಥವಾ ಕಾರ್ಖಾನೆಯಲ್ಲಿ ಕಟ್ಟಡದ ಅಂಗಗಳನ್ನು ಸಿದ್ಧಪಡಿಸಿ ಅವನ್ನು ನಿರ್ಮಾಣ ನಿವೇಶನಕ್ಕೆ ಸಾಗಿಸಿ, ಎಲ್ಲಿರಬೇಕೋ ಅಲ್ಲಿ ಸ್ಥಾಪಿಸುವ ಸಮಗ್ರ ಪ್ರಕ್ರಿಯೆ. ಸ್ವಸ್ಥಾನ ಕಾಂಕ್ರೀಟಿನ ನಿರ್ಮಾಣ, ಎಂದರೆ, ಕಟ್ಟಡದ ಅಂಗಗಳು ಎಲ್ಲಿರಬೇಕೋ ಅಲ್ಲಿಯೇ, ತಾತ್ಕಾಲಿಕ ವ್ಯವಸ್ಥೆಯಾದ ರೂಪಕವೆಂಬ ಅಚ್ಚು, ಊರೆ, ಸಾರುವೆಗಳ ಸಮುದಾಯದ ಮೇಲೆ ಹಸಿಯ ನಮ್ಯ ಕಾಂಕ್ರೀಟನ್ನು ಇರಿಸಿ, ಒಪ್ಪಮಾಡಿ ಸಿದ್ಧಪಡಿಸುವುದು. 

	ಈ ಪೂರ್ವನಿರ್ಮತ ಹಾಗೂ ಸ್ವಸ್ಥಾನನಿರ್ಮಿತ ಅಂಗಗಳ ಹಿತ ಮಿತ ಒಂದುಗೂಡುವಿಕೆಯೇ, ಸಮ್ಮಳಿತ ನಿರ್ಮಾಣ. ಪ್ರಕಾರಗಳು: (ಅ) ಚೌಬೀನೆ-ಉಕ್ಕುತೊಲೆ, (ಆ) ಉಕ್ಕು-ಸ್ವಸ್ಥಾನ ಕಾಂಕ್ರೀಟು, (ಇ) ಉಕ್ಕು-ಪೂರ್ವನಿರ್ಮಿತ ಕಾಂಕ್ರೀಟು-ಸ್ವಸ್ಥಾನ ಕಾಂಕ್ರೀಟು, (ಈ) ಪೂರ್ವನಿರ್ಮಿತ ಕಾಂಕ್ರೀಟು-ಸ್ವಸ್ಥಾನ ಕಾಂಕ್ರೀಟು.

(ಅ) ಚೌಬೀನೆಯ ತೊಲೆಗಳಿಗೆ ಉಕ್ಕಿನ ತೆಳು ಪಟ್ಟಿಗಳನ್ನು ಬಿಗಿಯುವರು. 

(ಆ) ಉಕ್ಕಿನ ಕಂಬಗಳನ್ನು ಸ್ವಸ್ಥಾನ ಕಾಂಕ್ರೀಟಿನಲ್ಲಿ ಹುದುಗಿಸುವರು. ಉಕ್ಕಿನ ತೊಲೆಗಳ 
ಮೇಲೆ ಸ್ವಸ್ಥಾನ ಕಾಂಕ್ರೀಟಿನ ಚಪ್ಪಡಿ ನಿರ್ಮಿಸುವರು.

(ಇ) ಉಕ್ಕಿನ ತೊಲೆಗಳ ಮೇಲೆ ಪೂರ್ವನಿರ್ಮಿತ ತೆಳುಚಪ್ಪಡಿ ಗಳನ್ನಿರಿಸಿ, ಅವುಗಳ ಮೇಲೆ 
ಮೇಲೆ ಸ್ವಸ್ಥಾನ ಕಾಂಕ್ರೀಟಿನ ಚಪ್ಪಡಿ ನಿರ್ಮಿಸುವರು. 

(ಈ) ಪೂರ್ವನಿರ್ಮಿತ ಪ್ರಬಲಿತ ಕಾಂಕ್ರೀಟು (ಆರ್‍ಸಿಸಿ), ಅಥವಾ ಪೂರ್ವನಿರ್ಮಿತ 
ಪೂರ್ವಪ್ರತಿಬಲಿತ ಕಾಂಕ್ರೀಟಿನ (ಪ್ರಿಸ್ಟ್ರೆಸ್ಡ್ ಕಾಂಕ್ರೀಟು) ತೊಲೆಗಳ ಮೇಲೆ ಅಥವಾ    
ಪ್ರತ್ಯೇಕವಾಗಿ ಅವನ್ನು ಹುದುಗಿಸಿ, ಸ್ವಸ್ಥಾನ ಕಾಂಕ್ರೀಟಿನ ಚಪ್ಪಡಿ ನಿರ್ಮಿಸುವರು.

	ಸಮ್ಮಿಳಿತ ಕ್ರಿಯೆ: ಸಮ್ಮಿಳಿತ ವಸ್ತುಗಳಲ್ಲಿರುವಂತೆಯೇ, ಸಮ್ಮಿಳಿತ ನಿರ್ಮಾಣಗಳಲ್ಲಿಯೂ ವಿವಿಧ ಪರಿಕರಗಳು ತಮ್ಮ ತಮ್ಮ ಗುಣಧರ್ಮಗಳನ್ನು ಕಾಪಾಡಿಕೊಂಡು ಬರುತ್ತವೆ. ಇಲ್ಲಿಯ ಸಮ್ಮಿಳಿತ ಕ್ರಿಯೆ ಯಶಸ್ವಿಯಾಗಲು, ಅವುಗಳ ನಡುವೆ ವಿಶ್ವಾಸಾರ್ಹವಾದ ಬಂಧನವಿರಬೇಕು. ಇದನ್ನು ಸಾಧಿಸಲು ಅಪರೂಪಣ ಸಂಯೋಜಕ (ಶಿಯರ್ ಕನೆಕ್ಟರ್) ಎಂಬ ಚಿಕ್ಕದಾದರೂ ಪರಿಣಾಮಕಾರಿ ಪರಿಕರವನ್ನು ಬಳಸುವರು (ಚಿತ್ರದಲ್ಲಿ-ಉ). ಬೋಲ್ಟುಗಳು, ಸರಳುಗಳು, ರೋಲ್ಡ್ ಖಂಡಗಳಾದ ಕೋನ ಖಂಡ, ಛಾನಲ್ ಖಂಡ ಇವು ಬಲು ಸಾಮಾನ್ಯವಾಗಿ ಬಳಸುವ ಅಪರೂಪಣ ಸಂಯೋಜಕಗಳು. 

	ಉಕ್ಕಿನ ತೊಲೆ, ಕಂಬಗಳಿಗೆ ಇವನ್ನು ಬೆಸೆಯುವರು (ವೆಲ್ಡ್). ಕಾಂಕ್ರೀಟ್ ತೊಲೆಗಳ ಮೇಲೆ ಇವುಗಳ ಜೊತೆಗೆ ಸಂಗಮ ಮೇಲ್ಮೈಯಲ್ಲಿ ಉಬ್ಬುತಗ್ಗುಗಳನ್ನು ನಿರ್ಮಿಸುವರು. 

	ಅನುಕೂಲತೆಗಳು ಮತ್ತು ಉಪಯೋಗ: ಸಮ್ಮಿಳಿತ ನಿರ್ಮಾಣದ ವೆಚ್ಚದಲ್ಲಿ ಹಾಳತ ಸಾಧಿಸಿ ಕಟ್ಟಡದಲ್ಲಿ ಅಧಿಕ ಅನುಕೂಲತೆಗಳನ್ನು ಪಡೆಯಬಹುದು. ಈ ಪೈಕಿ ಪ್ರಮುಖವಾದುದು ತೊಲೆಗಳ ಅಳತೆ ಕಡಿಮೆ ಆಗುವುದು.

	ಚೌಬೀನೆಯ ತೊಲೆಗಳಿಗೆ ಉಕ್ಕಿನ ತೆಳುಪಟ್ಟಿಗಳನ್ನು ಬಿಗಿಯುವುದ ರಿಂದ, ತೊಲೆಯ ಗಾತ್ರವನ್ನೂ ಭಾರವನ್ನೂ ಹೆಚ್ಚಿಸದೆ, ಅದರ ತೂಕಧಾರಣ ಸಾಮಥ್ರ್ಯವನ್ನು ಹೆಚ್ಚಿಸುತ್ತಾರೆ. ಒಂದು ಸ್ವಸ್ಥಾನ ಕಾಂಕ್ರೀಟಿನಿಂದ ಕಟ್ಟಡಗಳನ್ನು ನಿರ್ಮಿಸುವಾಗ, ನಿರ್ಮಾಣ ನಿವೇಶನದಲ್ಲಿ ಏರ್ಪಾಡು ಮಾಡಬೇಕಾದ ಗುಣನಿಯಂತ್ರಣದ ಹಾಗೂ ವ್ಯವಸ್ಥಾಪನೆ (ಮೇನೇಜ್‍ಮೆಂಟ್) ವೆಚ್ಚವೂ ನಿರ್ಮಾಣಾವಧಿಯೂ ಹೆಚ್ಚುವುದು. ಸಮ್ಮಿಳಿತ ನಿರ್ಮಾಣದಿಂದ ಕಟ್ಟಡಗಳನ್ನು ನಿರ್ಮಿಸುವಾಗ ನಿರ್ಮಾಣದ ವ್ಯವಸ್ಥಿತ ಮತ್ತು ಸುಸಜ್ಜಿತ ಕಾರ್ಖಾನೆಗಳಲ್ಲಿ ನಡೆಯುವುದರಿಂದ, ಗುಣಮಟ್ಟ ಉತ್ತಮವಾಗಿದ್ದು, ನಿರ್ಮಾಣಾವಧಿಯೂ ಕಡಿಮೆ ಯಾಗುವುದು. ಸಮ್ಮಿಳಿತ ನಿರ್ಮಾಣವನ್ನು ಎಲ್ಲ ರೀತಿಯ ಕಟ್ಟಡಗಳಿಗೂ ಅಳವಡಿಸಬಹುದಾದರೂ, ಕೈಗಾರಿಕಾ ಕಟ್ಟಡಗಳ ಮತ್ತು ಸೇತುವೆಗಳ ನಿರ್ಮಾಣದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ.    			
	
			(ಎಮ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ